ಮೃಗಶಿರಾ -
	ಒರೈಯನ್ (ಮಹಾವ್ಯಾಧ) ನಕ್ಷತ್ರಪುಂಜದ ಒಂದು ನಕ್ಷತ್ರ (ಲ್ಯಾಮ್ಡ ಒರೈಯನ್). ಲ್ಯಾಮ್ಡ ಹೆಕ್ ಪರ್ಯಾಯನಾಮ.  ವಿಷುವದಂಶ 5 ಗಂ.33 ಮಿ.38ಸೆ., ಘಂಟಾವೃತ್ತಾಂಶ 9º 23 33” ದಕ್ಷಿಣ.  ನಿರಪೇಕ್ಷಕಾಂತಿಮಾನ-5.11; ಪ್ರರೂಪವರ್ಗ ಔ8; ಸೂರ್ಯನಿಂದ 1,800 ಬೆಳಕು ವರ್ಷಗಳ ದೂರದಲ್ಲಿದೆ.  ಅಶ್ವಿನ್ಯಾದಿ ಇಪ್ಪತ್ತೇಳು ನಿತ್ಯನಕ್ಷತ್ರಗಳ ಪೈಕಿ ಐದನೆಯದು. ಪ್ರಾಚೀನ ಮಾನವನ ಕಲ್ಪನೆಗೆ ಅನುಗುಣವಾಗಿ ಮಹಾವ್ಯಾಧ-ವೃಷಭ (ಒರೈಯನ್-ಟಾರಸ್) ಹೋರಾಟದ ಪ್ರಸಂಗವನ್ನು ಆಕಾಶದ ಚಿತ್ರಪಟದಲ್ಲಿ ಮೂಡಿಸುವಾಗ ಮಹಾವ್ಯಾಧನ (ಬೇಟೆಗಾರ) ಕತ್ತಿನ ಬಳಿಯಲ್ಲಿ ಇರುವಂತೆ ಈ ನಕ್ಷತ್ರವನ್ನು ಚಿತ್ರಿಸುವುದಿದೆ.  ಕಾಲ್ಪನಿಕ ಮೃಗದ ಶಿರದ ಸ್ಥಾನದಲ್ಲಿರುವ ಬದಲಿಗೆ ವ್ಯಾಧಶಿರದ ಬಳಿಯಲ್ಲಿ ಇದ್ದು ಮೃಗಶಿರಾ ಎಂಬ ಹೆಸರನ್ನು ಈ ನಕ್ಷತ್ರ ತಾಳಿರುವುದು ಒಂದು ವಿಪರ್ಯಾಸ.  ಡಿಸೆಂಬರ್ ತಿಂಗಳಿನಲ್ಲಿ ಮಹಾವ್ಯಾಧ ನಕ್ಷತ್ರ ಪುಂಜದ ವ್ಯಾಧಭುಜ (ಬೆಲ್ಲಾಟ್ರಿಕ್) ಮತ್ತು ಆದ್ರ್ರಾ (ಬೆಟಲ್‍ಜ್ಯೂಸ್) ನಕ್ಷತ್ರಗಳನ್ನು ಕೂಡಿಸುವ ಕಾಲ್ಪನಿಕ ರೇಖೆಯ ಸನ್ನಿಹಿತ ನಡುಬಿಂದುವಿನ ಉತ್ತರಕ್ಕೆ ಆಕಾಶದಲ್ಲಿ ಕಾಣಿಸಿಕೊಳ್ಳುವ ಮೂರು ನಕ್ಷತ್ರಗಳ ಪೈಕಿ ಅಧಿಕ ಕಾಂತಿಯುತವಾದುದೇ ಮೃಗಶಿರಾ ನಕ್ಷತ್ರ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ